ದೇಶ ಕಾಲ (Desha Kaala)

    [This post has Kannada in Unicode. Read how to enable it on your system.]

    ದೇಶ ಕಾಲ ತ್ರೈಮಾಸಿಕ (Desha Kaala) ಜಯನಗರದಲ್ಲಿ ಇತ್ತೀಚೆಗೆ ತೆರೆದಿರುವ ಸಪ್ನ ಪುಸ್ತಕ ಮಳಿಗೆಗೆ ಸ್ನೇಹಿತನೊಂದಿಗೆ ಮೊನ್ನೆ ಭೇಟಿ ನೀಡಿದಾಗ 'ದೇಶ ಕಾಲ' ವೆಂಬ ಕನ್ನಡ ತ್ರೈಮಾಸಿಕ ಪ್ರಾರಂಭವಾಗಿರುವ ವಿಷಯ ತಿಳಿಯಿತು. ಮನ ಸೂರೆಗೊಳಿಸುವ ರೇಖಾಚಿತ್ರಗಳಿಂದ ಕೂಡಿದ ಚೆಂದದ ಪುಟ್ಟ ಪುಸ್ತಕವೊಂದು, ತನ್ನಲ್ಲಿ ಹೊರದೇಶಗಳ ವಿಚಾರಗಳು, ಕಥೆಗಳನ್ನು ಅಚ್ಚ ಕನ್ನಡದಲ್ಲಿ ತುಂಬಿಕೊಂಡಿರುವುದನ್ನು ನೋಡಿ ಬಹಳ ಸಂತಸವಾಯಿತು.

    ಮೊದಲ ಸಂಚಿಕೆಯಲ್ಲೇ, ಅಕಿರಾ ಕುರೊಸಾವಾರವರ ಚಿತ್ರವಾಗಿ ಮೂಡಿಬಂದ 'ರಾಶೊಮನ್' - ಜಪಾನಿನ ಲೇಖಕ ರುನೋಸಾಕೆ ಅವರ ಕಾದಂಬರಿಯ ಬಗ್ಗೆ ಲೇಖನವೊಂದಿದ್ದದ್ದು ನನ್ನ ಗಮನ ಸೆಳೆಯಿತು. ಚಂದ್ರಶೇಖರ ಕಂಬಾರರವರ 'ಧರೆಗೆ ದೊಡ್ಡವರು' ಎಂಬ ಹೊಸ ಕಾದಂಬರಿಯೊಂದರ ಮೊದಲ ಅಧ್ಯಾಯ ಕೂಡ ಈ ಸಂಚಿಕೆಯ ಹೈಲೈಟ್!. ಈಗಾಗಲೇ ಎರಡನೆಯ ಸಂಚಿಕೆಯೂ ಹೊರಬಂದಿದೆ.  

    ಕನ್ನಡದಲ್ಲಿ ಇಂತಹದ್ದೊಂದು ಪ್ರಾರಂಭವಾಗಿರುವುದು ಅತಿ ಸಂತಸದ ವಿಷಯವೆಂದೇ ಹೇಳಬಹುದು. ಸಾಹಿತ್ಯಕ್ಕೂ ಬಹುಶಃ ಕಮರ್ಶಿಯಲ್ ಟಚ್ ಇದ್ದರೇ ಚೆನ್ನ ಎಂದನಿಸುತ್ತದೆ. :) ಇದರ ಬೆಲೆಯೂ ಕೂಡ ಕೈಗೆಟುಕದೇ ಇರುವಂತಷ್ಟು ಬೆಲೆಯೇನಲ್ಲ... ಹತ್ತಿಪ್ಪತ್ತು ರೂಪಾಯಿಗಳಿಗೆ ಲಭ್ಯವಿರುವ ತರಂಗ ಸುಧಾ  ಕೊಳ್ಳೂವವರಿಗೆ, ನಮ್ಮಂತಹ ಮಧ್ಯಮವರ್ಗದವರಿಗೆ, ಸಾಮಾನ್ಯ ಕನ್ನಡಿಗರಿಗೆ ಪ್ರತಿ ಸಂಚಿಕೆಗೂ ೧೦೦ ರೂ ಬೆಲೆ ಇರುವ ಈ ಪುಸ್ತಕ ಸ್ವಲ್ಪ ಕಾಸ್ಟ್ಲಿ ಎನ್ನಿಸಬಹುದು, ಆದರೆ ಈ ಪ್ರಯೋಗ ಹಾಗೂ ಪ್ರಯತ್ನ ಒಳ್ಳೆಯ ದಿಕ್ಕಿನೆಡೆಗೆ ಸಾಗಿರುವಂತದ್ದು.