ದೌರ್ಗಂಧಿಕಾಪಹರಣ (DaurgandhikaapaharaNa)
July 1, 2005 - 21:48 — admin
[This post has Kannada in Unicode. Read how to enable it on your system.] 
ಸ್ವತಃ ಬಿ ಜಿ ಎಲ್ ಸ್ವಾಮಿಯವರೇ ಬರೆದಿರುವ ಚಿತ್ರಗಳುಳ್ಳ ಈ ಪುಟ್ಟ ಕೃತಿ, ಸದಭಿರುಚಿಯ ಹಾಸ್ಯವುಳ್ಳ ಓದಲೇಬೇಕಾದಂತಹ ಪುಸ್ತಕ. “ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ವಿಜ್ಞಾನ ವಿಷಯಗಳನ್ನು ಪ್ರಸ್ತಾವಿಸುವ ಬರವಣಿಗೆ” ಎಂದು ಪೀಠಿಕೆಯಲ್ಲಿ ಬರೆಯುವ ಸ್ವಾಮಿಯವರು ಈ ಪುಸ್ತಕದ ‘ಮನರಂಜನಾ’ ಮೌಲ್ಯದ ಬಗ್ಗೆ ಆಗ ಅಲೋಚಿಸಿದ್ದಿಲ್ಲದಿರಬಹುದು, ಆದರೆ ಮೂರು ಹಾಸ್ಯಮಯ ‘ಉಪಾಖ್ಯಾನ’ಗಳಿಂದ ಕೂಡಿದ ಈ ಕೃತಿ ಒಳ್ಳೆಯ ಮನರಂಜನೆ ನೀಡುತ್ತದೆ.
ಸಸ್ಯಶಾಸ್ತ್ರ, ಹಾಸ್ಯ, ವಿಜ್ಞಾನದ ತುಣುಕುಗಳು - ಈ ಎಲ್ಲವೂ ಈ ಕೃತಿಯಲ್ಲಿವೆ. ತೆರ್ಕುಮಲೆಯ ಕಾಡಿನಲ್ಲಿ ಹೊಟ್ಟೆ ಬಿರಿಯುವಂತೆ ತಿಂದ ಗುಜ್ಜು - ಆರ್ಟೋಕಾರ್ಪಸ್ ಇಂಟೆಗ್ರಾ (Artocarpus integra) ಅಂದಿನ ರಾತ್ರಿ ಎಲ್ಲರಿಗೂ ದುರ್ಗಂಧ ಪಾನ ಮಾಡುವಂತೆ ಮಾಡಿದ್ದು, ಕೊನೆಗೆ ಕಠಿಣ ಗುರುಗಳ ಕುರುಡು ಲೆಕ್ಕಾಚಾರದ ಆಜ್ಞೆ ಹರಳೆಣ್ಣೆ ಕುಡಿಯುವಂತೆ ಮಾಡಿದ್ದೂ - ಬಹಳ ಚೆನ್ನಾಗಿ ಬರೆಯಲ್ಪಟ್ಟಿದೆ. ದ್ವಿತೀಯೋಪಾಖ್ಯಾನದಲ್ಲಿ ಬರುವ ‘ವಾನರ ಸೈನ್ಯದ ದಾಳಿ’ ಚೆನ್ನಾಗಿ ನಗಿಸಿಬಿಡುವಂತದ್ದು :) ಅಲ್ಲದೇ ಡ್ಯೂರಿಯನ್ (Durio Zibethinus) ಹಣ್ಣಿನ ಕಥನ - ಅದರ ದುರ್ವಾಸನೆ ಇನ್ನಷ್ಟು ಹಾಸ್ಯಕ್ಕೆ ಸಾಮಗ್ರಿ ಒದಗಿಸುತ್ತದೆ. ತೃತೀಯೋಪಾಖ್ಯಾನ ಸ್ವಾಮಿಯವರು ಉಪನ್ಯಾಸಕರಾಗಿದ್ದ ಸಮಯದ್ದು. ಇದರಲ್ಲಿ ‘ತಾಟಕಿಯ’ ತಾಂಡವದ ಬಗ್ಗೆ - ಅವಳು ತನ್ನ ಜೊತೆ ಹಿಡಿದು ತಂದ ಸಾಪ್ರೋಸ್ಮಾ ಇಂಡಿಕಮ್ (Saprosma Indicum) ಗಿಡದಿಂದ ಬಿತ್ತರಿಸಿದ ಪರಮ ದುರ್ಗಂಧದ ಬಗ್ಗೆ ಹಾಸ್ಯಮಯ ವ್ಯಾಖ್ಯಾನವಿದೆ.
ಕೃತಿಯಿಂದ ಕೆಲವು ಹಾಸ್ಯಮಯ ಚುಟುಕುಗಳು:
(ಪ್ರಥಮೋಪಾಖ್ಯಾನ)
ಈ ಗದ್ದಲದಿಂದ ಗುರುಗಳಿಗೆ ಎಚ್ಚರವಾಯಿತು. “ಏಕಲವ್ಯ, ಏನದು ಸದ್ದು?” ಎಂದು ವಿಚಾರಿಸಿದರು. ನಕುಲ “ಏಕಲ್ ವ್ಯಾಲಾ ಬುಡ್ಡೀನಿಂದ ಗಂದಾನ ಒರಕ್ಕೆ ಬುಟ್ಟುಟ್ಟಾ ಸಾರ್” ಎಂದು ಹಿರಿಯ ಕೊರಲಿನಲ್ಲಿ ಬದಲು ಹೇಳಿದ.
(ದ್ವಿತೀಯೋಪಾಖ್ಯಾನ)
ವಿಧ್ಯಾರ್ಥಿಗಳನ್ನು ಮೀರಿಸಿದ ಸಂಕಟ ಆಂಜನೇಯೋಪಾಧ್ಯಾಯರಿಗೆ, ಬೊಜ್ಜೆಯನ್ನು ಬಲವಾಗಿ ಹಿಸುಕಿಕೊಳ್ಳುತ್ತ “ಚಂಡಾಲ ಡೂರಿಯನ್! ರಾಮರಾಮಾ, ಈ ಹಣ್ಣನ್ನು ಏಕೆ ತಾನೆ ಹುಟ್ಟಿಸಿದೆಯಪ್ಪ! ” ಎಂದು ಬಿಸುಸುಯ್ದು ವಯಕ್ ಕೊಯಕ್ ಶಬ್ದಗಳನ್ನು ವಾಕರಿಸುತ್ತಿದ್ದರು.
ಒಟ್ಟಾರೆ ಬಿ ಜಿ ಎಲ್ ರವರ ಪುಸ್ತಕಗಳು ಓದುಗರಲ್ಲಿ ತನ್ನದೇ ಆದಂತ ಛಾಪು ಮೂಡಿಸುತ್ತವೆ. ಎಂದಾದರೂ ಒಮ್ಮೆ ಬಸವನಗುಡಿಗೆ ಭೇಟಿ ಕೊಟ್ಟಾಗ ಈ ಪುಟ್ಟ ಪುಸ್ತಕವನ್ನು ಕೊಂಡೊಯ್ದು ಓದಲು ಮರೆಯದಿರಿ :)
- admin's blog
- 1855 reads
Comments
July 19, 2005 - 14:36 — Hiri (not verified)
Namasthe, Neevu post maadidha dhinaane naanu "Ankitaa" ge lagge
Namasthe,
Neevu post maadidha dhinaane naanu "Ankitaa" ge lagge
ittu,pusthakaana kondu kondu oodhidhe.
Thumbaa sogasaagidhe...dhanyavaadagalu intha books na refer
maadiddakke.

